ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಒಂದು ಹೋಬಳಿ; ಐತಿಹಾಸಿಕ ಮತ್ತು ಯಾತ್ರಾ ಸ್ಥಳ. ವರದಾನದಿಯ ದಡದಲ್ಲಿದೆ. ಈ ಊರನ್ನು ಹಿಂದೆ ಚಂದ್ರಗುಪ್ತಿ, ಚಂದ್ರಗುಪ್ತಪುರ, ಚಂದ್ರಗುತ್ತಿಪುರ, ಚಂದ್ರಗುತ್ತಿ ವೇಂಠೆ ಎಂದು ಕರೆಯುತ್ತಿದ್ದರೆಂಬುದು ಹಲವು ಶಾಸನಗಳಿಂದ ತಿಳಿದುಬರುತ್ತದೆ. 
ಈ ಊರಿನ ಬಹು ಎತ್ತರದ ಗುಡ್ಡ ಚಂದ್ರನ ಹಾದಿಯಲ್ಲಿ ಅಡ್ಡಬಂದದ್ದರಿಂದಾಗಿ ಇದಕ್ಕೆ ಚಂದ್ರಗುತ್ತಿಯೆಂದು ಹೆಸರು ಬಂದಿತೆಂದೂ ಜರಾಸಂಧ ಮತ್ತು ಶ್ರೀ ಕೃಷ್ಣರು ಇಲ್ಲಿ ಯುದ್ಧ ಮಾಡುತ್ತಿದ್ದಾಗ ಕೃಷ್ಣ ಅಡಗಿ ಕುಳಿತುಬಿಟ್ಟನೆಂದೂ ಜರಾಸಂಧ ಅವನನ್ನು ಹುಡಕಲಾರದೆ ಇಡೀ ಗುಡ್ಡೆಯನ್ನೇ ಎತ್ತಿದ್ದನ್ನು ಕಂಡು ಚಂದ್ರ ನಕ್ಕನೆಂದೂ ಸ್ಥಳಪುರಾಣ ಹೇಳುತ್ತದೆ. ಭೌಗೋಳಿಕವಾಗಿ ಇದು ಬಹುಶಃ ಜ್ವಾಲಾಮುಖಿಯಿಂದುಂಟಾಗಿರಬೇಕು. 865 ಮೀ.ಎತ್ತರವಿರುವ ಈ ಗ್ರ್ಯಾನೈಟ್ ಗುಡ್ಡದಲ್ಲಿ ಕಲ್ಲನ್ನು ತೆಗೆಯುವ ಉದ್ಯಮ ಅನೇಕ ವರ್ಷಗಳಿಂದ ನಡೆದುಬಂದಿದೆ. ಇದು ಚಂದ್ರಗುತ್ತಿ ಕಲ್ಲು ಎಂದು ಪ್ರಸಿದ್ಧವಾಗಿದೆ.

ಚಂದ್ರಗುತ್ತಿಯು ಬನವಾಸಿ ಕದಂಬರ ಪ್ರಾಚೀನ ನಿವಾಸವಾಗಿತ್ತೆಂದೂ ಗುಡ್ಡದ ಬುಡದಲ್ಲಿರುವ ನಗರವನ್ನು ತ್ರಿನೇತ್ರ ಕದಂಬ ಸ್ಥಾಪಿಸಿದನೆಂದೂ ಹೇಳುತ್ತಾರೆ. ಇದಕ್ಕೆ ಹೆಚ್ಚಿನ ಆಧಾರಗಳಿಲ್ಲ. ಆದರೆ ಮಲೆನಾಡ ಸೆರಗಿನಲ್ಲಿರುವ ಈ ಪ್ರದೇಶ ಹೆಚ್ಚು ಪ್ರಾಮುಖ್ಯ ಗಳಿಸಿದ್ದು ಹಲವು ಶತಮಾನಗಳ ಅನಂತರ, ವಿಜಯನಗರದ ಅರಸರ ಕಾಲದಲ್ಲಿ. ವಿಜಯನಗರ ಸಾಮ್ರಾಜ್ಯದ 1ನೆಯ ಹರಿಹರನ ಕಾಲದಲ್ಲಿ (1336-1356) ಮಾರಪ್ಪನೆಂಬುವನು ಪಶ್ಚಿಮ ಕೊಂಕಣದ ಮಲೆರಾಜ್ಯವನ್ನು ಆಳುತ್ತಿದ್ದಾಗ ಚಂದ್ರಗುತ್ತಿಪುರ ಆತನ ಆಡಳಿತ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಅನಂತರ ಇಮ್ಮಡಿ ಹರಿಹರನ ಕಾಲದಲ್ಲಿ (1377-1404) ಮಹಾಪ್ರಧಾನಿಯಾದ ಮಲ್ಲಪೊಡೆಯ ಗುತ್ತಿದುರ್ಗದ (ಚಂದ್ರಗುತ್ತಿ) ಪ್ರಾಂತ್ಯಾಧಿಕಾರಿಯಾಗಿದ್ದನೆಂದು ಕಂಡುಬರುತ್ತದೆ. 13-16ನೆಯ ಶತಮಾನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಪೋರ್ಚುಗೀಸರು ವಿಜಯನಗರದ ಅರಸರೊಡನೆ ವ್ಯಾಪಾರ-ವ್ಯವಹಾರಗಳನ್ನು ಅಧಿಕಗೊಳಿಸಿದ ಕಾರಣ ಚಂದ್ರಗುತ್ತಿ ಮುಂತಾದ ನಗರಗಳು ಪೇಟೆಗಳೆನಿಸಿ, ವೇಂಠೆಗಳಾಗಿ, ಪ್ರಾಂತ್ಯಗಳಾಗಿ ಮಾರ್ಪಟ್ಟುವು. ಆದ್ದರಿಂದ ವಿಜಯನಗರದ ಕಾಲದಲ್ಲಿ ಇದೊಂದು ಆಡಳಿತ ಕೇಂದ್ರವಾಗಿತ್ತೆಂದು ಸ್ಪಷ್ಟವಾಗುತ್ತದೆ. ಚಂದ್ರಗುತ್ತಿ ಸ್ವಲ್ಪಕಾಲ ಇಕ್ಕೇರಿ ನಾಯಕರ ವಶದಲ್ಲಿತ್ತು. ಹೈದರ್ ಅಲಿಯ ಕಾಲದಲ್ಲಿ ಇದು ಮುಸ್ಲಿಮರ ಧಾಳಿಗೆ ತುತ್ತಾಗಿತ್ತು. 18ನೆಯ ಶತಮಾನದಲ್ಲಿ ಬಿಳಿಗಿಯ ಸೋಮಶೇಖರನಾಯಕ ಚಂದ್ರಗುತ್ತಿಯನ್ನು ಧ್ವಂಸ ಮಾಡಿದನೆಂದು ತಿಳಿದುಬರುತ್ತದೆ. ಅನಂತರ ಪರಶುರಾಮಭಾವೋ ಮತ್ತು ಧುಂಡಿಯಾ ಎಂಬ ಇಬ್ಬರು ಅಧಿಕಾರಿಗಳು ಕೆಲವು ತಿಂಗಳುಗಳ ಕಾಲ ಇಲ್ಲಿ ಆಡಳಿತ ನಡೆಸಿದರೆನ್ನಲು ಆಧಾರಗಳಿವೆ.

ಚಂದ್ರಗುತ್ತಿಯಲ್ಲಿ ನೋಡತಕ್ಕ ಅನೇಕ ಐತಿಹಾಸಿಕ ಸ್ಥಳಗಳುಂಟು. ಗುತ್ಯಮ್ಮ ಅಥವಾ ಅಮ್ಮನವರು ಎಂದು ಕರೆಯಲ್ಪಡುವ ರೇಣುಕಾಂಬೆಯ ದೇವಾಲಯ ಗುತ್ತಿಗುಡ್ಡೆಯ ಬುಡದಲ್ಲಿದೆ. ಪರಶುರಾಮ ತನ್ನ ತಾಯಿಯಾದ ರೇಣುಕೆಯನ್ನು ಕಡಿಯಲು ಅಟ್ಟಿಸಿಕೊಂಡು ಬಂದಾಗ ನೈಸರ್ಗಿಕವಾದ ಈ ಗುಹಾಲಯದಲ್ಲಿ ಆಕೆ ಅವಿತು ಕುಳಿತಿದ್ದಳೆಂದು ಜನರ ನಂಬಿಕೆ. ಈ ಗುಹಾಲಯದ ಮುಂಭಾಗದಲ್ಲಿ ಸುಕನಾಸಿಯೂ ಅದಕ್ಕೆ ಹೊಂದಿಕೊಂಡು ನವರಂಗವೂ ಇವೆ. ಇದು ಬಹುಶಃ ವಿಜಯನಗರ ಶೈಲಿಯ ಕಟ್ಟಡ. ಇಲ್ಲಿ ಸರಸ್ವತಿಯದೆಂದು ಹೇಳಲಾದ ಒಂದು ವಿಗ್ರಹವಿದೆ. ಅದರ ಎರಡೂ ಕಡೆ ಎರಡು ರುಂಡಗಳನ್ನು ಕೆತ್ತಿರುವುದು ಗಮನಾರ್ಹ. ನವರಂಗದಲ್ಲಿ ಹಾಸಿದ ಚಪ್ಪಡಿಗಳ ಮೇಲೆ ಅನೇಕ ಭಕ್ತರು ಹೆಸರುಗಳನ್ನು ಬರೆಯಿಸಿದ್ದಾರೆ. ಅವುಗಳಲ್ಲಿ ಕೆಲವು ಹೆಸರುಗಳು ಪಾಳೆಯಗಾರರವು. ಈ ದೇವಾಲಯದ ಸಮೀಪದಲ್ಲಿ ಇರುವುದು ಮಾತಂಗಿ ದೇವಾಲಯ. ಇದರ ಸುತ್ತಮುತ್ತ ಮಾಸ್ತಿಕಲ್ಲುಗಳೂ ವೀರಗಲ್ಲುಗಳೂ ಇವೆ. ಇಲ್ಲಿರುವ ಎತ್ತರದ ಪರಶುರಾಮ ವಿಗ್ರಹ ಮುಖ್ಯವಾದದ್ದು. ಗುಡ್ಡವನ್ನೇರುತ್ತಿದ್ದಂತೆ ಕಾಣಬರುವುದು ತಾವರೆಕೆರೆ. ಅದರ ಪಕ್ಕದಲ್ಲಿ ವಿಜಯನಗರ ಕಾಲದ ಕೋಟೆ ಕೊತ್ತಲಗಳಿವೆ. ಅಲ್ಲಿಂದ ಸುಮಾರು 30 ಮೀ. ಮೇಲೇರಿದಾಗ ಸಿಗುವ ಇನ್ನೊಂದು ಗುಹೆಯಲ್ಲಿ ದಂಡಿನ ದುರ್ಗಿ ಎಂಬ ಸುಂದರವಾದ ಮಹಿಷಾಸುರ ಮರ್ದಿನಿಯ ವಿಗ್ರಹವುಂಟು. ಈ ಗುಹೆಯ ಮುಂಭಾದಲ್ಲಿರುವ ಒಂದು ಕಗ್ಗಲ್ಲಿನ ಫಲಕದ ಮೇಲೆ ಇಬ್ಬರು ಭಕ್ತರು ದುರ್ಗೆಯ ಪಾದಕ್ಕೆ ತಮ್ಮ ಶಿರಗಳನ್ನು ಸರ್ಮಪಿಸುತ್ತಿರುವಂತೆ ಚಿತ್ರಿಸಲಾಗಿದೆ. ಅಲ್ಲಿಂದ ಮುಂದೆ ಸಾಗಿದರೆ ದೊಡ್ಡ ಫಿರಂಗಿ ಕೋಟೆಯ ಬುರುಜುಗಳು, ಪಾಳುಬಿದ್ದ ಮಸೀದಿ ಶಿಲಾಪ್ರತಿಷ್ಠಾನಗಳು ಮುಂತಾದ ಅನೇಕ ಪ್ರಾಚೀನ ಅವಶೇಷಗಳು ಕಂಡುಬರುತ್ತವೆ.

ಸೌದೆ ಭಾವಾನಿ ತೀರ್ಥ, ಶಂಕರಲಿಂಗ ತೀರ್ಥ ಎಂಬ ಎರಡು ಬಾವಿಗಳ ಪಕ್ಕದಲ್ಲಿ ಕೆಲವು ಶಾಸನಗಳಿವೆ. ಗುಡ್ಡದ ತುದಿಯಲ್ಲಿ ಒಂದು ದೇವಾಲಯದ ತಳಪಾಯವಿದೆ. ಇದು ಚಂದ್ರಮೌಳೀಶ್ವರ ದೇವಾಲಯ. ಅದರಿಂದಾಗಿ ಆ ಊರಿಗೆ ಚಂದ್ರಗುತ್ತಿಯೆಂದು ಹೆಸರು ಬಂದಿರಬಹುದು. ಚಂದ್ರಗುತ್ತಿಯಲ್ಲಿ ಕಂಡುಬರುವ ಇತರ ದೇವಾಲಯಗಳಲ್ಲಿ ಶೂಲದ ಭೀರಪ್ಪನ ಗುಡಿ, ಭೈರವ ದೇವಾಲಯ ಮತ್ತು ಶಿವಾಲಯ ಮುಖ್ಯವಾದವು. ಶೂಲದ ಭೀರಪ್ಪನ ಗುಡಿಯಲ್ಲಿ ಭಕ್ತರು ಒಪ್ಪಿಸಿದ ಸಾವಿರಾರು ತ್ರಿಶೂಲಗಳ ರಾಶಿಯಿದೆ. 

ಚಂದ್ರಗುತ್ತಿಯ ರೇಣುಕಾಂಬೆಯ ಜಾತ್ರೆಯಲ್ಲಿ ಕೋಣಗಳನ್ನು ಹಿಂದೆ ಬಲಿ ಕೊಡುತ್ತಿದ್ದರು. ಬೆತ್ತಲೆಸೇವೆ, ಉರುಳುಸೇವೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಪಶುಬಲಿಯನ್ನು ನಿಲ್ಲಿಸಲಾಗಿದೆ.

ಚಂದ್ರಗುತ್ತಿಯ ಸುತ್ತಮುತ್ತಣ ನೆಲ ಫಲವತ್ತಾದುದು. ಇಲ್ಲಿ ಶ್ರೀಗಂಧ, ಬೀಟೆ, ಹೊನ್ನೆ ಮುಂತಾದ ಹಲವು ಮರಗಳಿವೆ.  ಅಲ್ಲದೆ ಈ ಊರಿನ ಪಕ್ಕದಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ.	(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ